
ಮಂಗಳೂರು : 2024ರ ಫೆಬ್ರವರಿ ತಿಂಗಳಲ್ಲಿ ಭಗವದ್ಗೀತೆ ಮತ್ತು ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹರಿಯಬಿಟ್ಟು ಸಾಮರಸ್ಯ ಕೆಡಿಸುವ ಯತ್ನ ಮಾಡಿದ್ದು ಘಟನೆ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



ವಿದೇಶದಲ್ಲಿ ಅಡಗಿದ್ದ ಆರೋಪಿಯನ್ನು ಇದೀಗ ಅಲ್ಲಿಂದ ಬರುವಾಗಲೇ ಮುಂಬೈ ಏರ್ಪೋರ್ಟ್ ನಲ್ಲಿ ಬಂಧಿಸಲಾಗಿದೆ.
ಆರೋಪಿಯನ್ನು ಮುಂಬೈನ ಚಾರ್ಕೋಪ್ ಎಂಬಲ್ಲಿನ ನಿವಾಸಿ ಫೆಲಿಕ್ಸ್ ಎಡ್ವರ್ಡ್ ಮಥಾಯಿಸ್ (56) ಎಂದು ಗುರುತಿಸಲಾಗಿದೆ.

ಅವಹೇಳನ ಪೋಸ್ಟ್ ವೈರಲ್ ಮಾಡಿದ ಬಗ್ಗೆ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿ ಫೆಲಿಕ್ಸ್ ಆ ಸಮಯದಲ್ಲಿ ಸೌದಿ ಅರೇಬಿಯಾದಲ್ಲಿದ್ದು, ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಬಳಿಕ ಫೆಲಿಕ್ಸ್ ಸೌದಿಯಲ್ಲಿ ಉದ್ಯೋಗದಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಆರೋಪಿ ವಿರುದ್ದ ಲುಕ್ ಔಟ್ ಸರ್ಕುಲರ್ ಹೊರಡಿಸಲಾಗಿತ್ತು.
ಆರೋಪಿ ಫೆಲಿಕ್ಸ್ ಮುಂಬೈನ ಸಹರಾ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಬಂದು ಇಳಿದ ಕೂಡಲೇ ಇಮಿಗ್ರೇಶನ್ ಅಧಿಕಾರಿಗಳು ತಡೆಹಿಡಿದಿದ್ದು, ಡಿ. 5ರಂದು ಮುಂಬೈಯ ಸಹರಾ ಏರ್ಪೋರ್ಟ್ ನಲ್ಲಿ ದಸ್ತಗಿರಿ ಮಾಡಿ ತನಿಖೆಗೆ ಒಳಪಡಿಸಲಾಗಿದೆ.
ಕಂಕನಾಡಿ ಪೊಲೀಸರು ಆರೋಪಿಯನ್ನು ಮಂಗಳೂರಿಗೆ ಕರೆತಂದಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ಇನ್ನೋರ್ವ ಆರೋಪಿತ ಎವಿಜಿನ್ ಜಾನ್ ಡಿಸೋಜಾ (57) ಎಂಬವನನ್ನು 2024ರ ನವೆಂಬರ್ 11ರಂದು ದಸ್ತಗಿರಿ ಮಾಡಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

