ಸೈಬರ್ ವಂಚಕರ ‘ಡಿಜಿಟಲ್ ಅರೆಸ್ಟ್’ನಿಂದ ಮುಲ್ಕಿಯ ಹಿರಿಯ ದಂಪತಿ ಪಾರು: 84 ಲಕ್ಷ ರೂ. ಉಳಿಸಿದ ಮುಲ್ಕಿ ಪೊಲೀಸರು

0 0
Read Time:3 Minute, 54 Second

ಮಂಗಳೂರು: ಡಿಜಿಟಲ್ ಲೋಕದಲ್ಲಿ ಹಿರಿಯ ನಾಗರಿಕರನ್ನು ಗುರಿಯಾಗಿಸಿ ನಡೆಯುವ ಸೈಬರ್ ವಂಚನೆಯ ಮತ್ತೊಂದು ಭಾರಿ ಯತ್ನವನ್ನು ಮುಲ್ಕಿ ಪೊಲೀಸರು ಮತ್ತು ಕಿನ್ನಿಗೋಳಿಯ ಕೆನರಾ ಬ್ಯಾಂಕ್ ಮ್ಯಾನೇಜರ್ ಸಮಯೋಚಿತ ಕಾರ್ಯದಿಂದ ವಿಫಲಗೊಳಿಸಿದ್ದಾರೆ. ಸೈಬರ್ ಕಳ್ಳರ ‘ಡಿಜಿಟಲ್ ಅರೆಸ್ಟ್’ ಬಲೆಗೆ ಬಿದ್ದಿದ್ದ ದಾಮಸಕಟ್ಟೆಯ ಹಿರಿಯ ದಂಪತಿಯ 84 ಲಕ್ಷ ರೂಪಾಯಿ ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ಘಟನೆ?
ಮುಲ್ಕಿ ಪೊಲೀಸ್ ಠಾಣಾ ಸರಹದ್ದಿನ ದಾಮಸಕಟ್ಟೆ ನಿವಾಸಿಗಳಾದ 84 ವರ್ಷದ ಬೆನ್ಡಿಕ್ಟ್ ಪೆರ್ನಾಂಡಿಸ್ ಮತ್ತು 71 ವರ್ಷದ ಲಿಲ್ಲಿ ಸಿಸಿಲಿಯ ಫೆರ್ನಾಂಡಿಸ್ ಅವರಿಗೆ ಡಿ. 1ರಂದು ಅಪರಿಚಿತರು ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿದ್ದಾರೆ. ಉತ್ತರ ಪ್ರದೇಶದ ಸಿಐಡಿ ಪೊಲೀಸರ ಸೋಗಿನಲ್ಲಿ ಮಾತನಾಡಿದ ವಂಚಕರು, ದಂಪತಿ 6 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸಿಲುಕಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ನಂಬಿಸಿದ್ದಾರೆ.


ಸೈಬರ್ ಕಳ್ಳರು ಹಿರಿಯ ದಂಪತಿಯನ್ನು ‘ಡಿಜಿಟಲ್ ಅರೆಸ್ಟ್’ಗೆ ಒಳಪಡಿಸಿ, ತನಿಖೆಗಾಗಿ ತಮ್ಮ ಖಾತೆಯಲ್ಲಿರುವ ಹಣವನ್ನು ತಕ್ಷಣ ವರ್ಗಾಯಿಸಬೇಕು ಎಂದು ಸೂಚಿಸಿದ್ದಾರೆ. ವಂಚಕರ ಮಾತನ್ನು ನಂಬಿದ ದಂಪತಿ, ಕಿನ್ನಿಗೋಳಿಯ ಕೆನರಾ ಬ್ಯಾಂಕ್‌ನಲ್ಲಿದ್ದ ತಮ್ಮ ಖಾತೆಯಿಂದ ಸುಮಾರು 84 ಲಕ್ಷ ರೂಪಾಯಿ ದೊಡ್ಡ ಮೊತ್ತದ ಹಣವನ್ನು ವಂಚಕರು ಸೂಚಿಸಿದ ಖಾತೆಗೆ ರವಾನಿಸಲು ಬ್ಯಾಂಕಿಗೆ ತೆರಳಿದ್ದಾರೆ.


ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆ
ಬ್ಯಾಂಕಿನಲ್ಲಿ ದಂಪತಿ ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಮುಂದಾದಾಗ, ಬ್ಯಾಂಕ್ ಮ್ಯಾನೇಜರ್ ರಾಯಸ್ಟನ್ ಅವರಿಗೆ ಸಂಶಯ ಬಂದಿದೆ. ಅವರು ದಂಪತಿಯ ಬಳಿ ಹಣ ವರ್ಗಾವಣೆಯ ಉದ್ದೇಶದ ಬಗ್ಗೆ ವಿಚಾರಿಸಿದಾಗ, ದಂಪತಿಗಳು ಸರಿಯಾದ ಉತ್ತರ ನೀಡಲು ಸಾಧ್ಯವಾಗಲಿಲ್ಲ. ವೃದ್ಧರ ನಡವಳಿಕೆಯಿಂದ ಗೊಂದಲಗೊಂಡ ಮ್ಯಾನೇಜರ್, ತಕ್ಷಣವೇ ಸೈಬರ್ ವಂಚಕರು ಒದಗಿಸಿದ ಖಾತೆಗೆ ಹಣ ವರ್ಗಾವಣೆ ಮಾಡುವುದನ್ನು ನಿಲ್ಲಿಸಿದ್ದಾರೆ.


ತಕ್ಷಣವೇ ಅವರು ಕಿನ್ನಿಗೋಳಿ ಪರಿಸರದ ಬೀಟ್ ಸಿಬ್ಬಂದಿಯವರಾದ ಯಶವಂತ ಕುಮಾರ ಮತ್ತು ಠಾಣಾ ಗುಪ್ತವಾರ್ತೆ ಸಿಬ್ಬಂದಿ ಕಿಶೋರ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.


ಪೊಲೀಸರಿಂದ ತಕ್ಷಣದ ಕ್ರಮ
ಮಾಹಿತಿ ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ಮುಲ್ಕಿ ಪೊಲೀಸರು, ತಕ್ಷಣ ವೃದ್ಧ ದಂಪತಿಗಳ ಮನೆಗೆ ತೆರಳಿದ್ದಾರೆ. ಅವರ ಮೊಬೈಲ್ ಪರಿಶೀಲಿಸಿದಾಗ, ಅವರು ಸೈಬರ್ ವಂಚಕರ ‘ಡಿಜಿಟಲ್ ಅರೆಸ್ಟ್’ಗೆ ಒಳಗಾಗಿರುವುದು ದೃಢಪಟ್ಟಿದೆ.


ಪೊಲೀಸ್ ಸಿಬ್ಬಂದಿಗಳು ಕೂಡಲೇ ಬ್ಯಾಂಕ್ ಮ್ಯಾನೇಜರ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿ, ಹಣ ವರ್ಗಾವಣೆಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಬಳಿಕ ವೃದ್ಧ ದಂಪತಿಗಳಿಗೆ ಸೈಬರ್ ವಂಚನೆ ಕುರಿತು ತಿಳುವಳಿಕೆ ನೀಡಿ, ಸೈಬರ್ ಕಳ್ಳರ ಬಲೆಯಿಂದ ಪಾರು ಮಾಡಿದ್ದಾರೆ. ಈ ಮೂಲಕ, ದಂಪತಿಯ ಬಹುದೊಡ್ಡ ಮೊತ್ತದ ಹಣವನ್ನು ಉಳಿಸಲಾಗಿದೆ.
ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *