
ಚಿಕ್ಕಮಗಳೂರು: ನಗರದ ಎಂಇಎಸ್ ಪಿಯು ಕಾಲೇಜಿನಲ್ಲಿ ಅಯ್ಯಪ್ಪ ಮಾಲೆ ಧರಿಸಿ ಕಾಲೇಜಿಗೆ ಬಂದಿದ್ದ ಮೂವರು ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಹಾಕಿ, ಮಾಲೆ ತೆಗೆದು ಒಳಗೆ ಬನ್ನಿ ಎಂದು ತಾಕೀತು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಹಿಂದೂ ಸಂಘಟನೆ, ಬಿಜೆಪಿ ಕಾರ್ಯಕರ್ತರು ಕಾಲೇಜು ಬಳಿ ಬಂದು ಪ್ರಿನ್ಸಿಪಾಲ್ ನಡುವೆ ವಾಗ್ವಾದ ನಡೆಸಿದ್ದಾರೆ.


ಚಿಕ್ಕಮಗಳೂರು ನಗರದ MES ಪಿಯು ಕಾಲೇಜಿನಲ್ಲಿ ಮೊದಲ ವರ್ಷದ ಪಿಯು ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆ ಧರಿಸಿ ತರಗತಿಗೆ ಬಂದಿದ್ದಾರೆ. ಆದ್ರೆ, ಇದಕ್ಕೆ ಪ್ರಿನ್ಸಿಪಾಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಅಯ್ಯಪ್ಪ ಮಾಲೆ ತೆಗೆದು ಬರುವಂತೆ ಸೂಚನೆ ನೀಡಿ ಹೊರಗೆ ಕಳುಹಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಸೇರಿದಂತೆ ನೂರಾರು ಹಿಂದೂ ಸಂಘಟನೆಗಳ ಮುಖಂಡರು, ಕಾಲೇಜು ಬಳಿ ಬಂದು ಕಾಲೇಜ್ ಅಡಳಿತ ಮಂಡಳಿಯ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅಯ್ಯಪ್ಪ ಮೂಲಾಧಾರಿಗಳನ್ನ ಹೊರ ಕಳಿಸಿದ್ರೆ ನೂರಾರು ವಿದ್ಯಾರ್ಥಿಗಳಿಗೆ ಮಾಲೆ ಹಾಕಿಸುವ ಎಚ್ಚರಿಕೆ ನೀಡಿದರು.
ಕಾಲೇಜು ಬಳಿ ನೂರಾರು ಹಿಂದೂ ಸಂಘಟನೆ ಕಾರ್ಯಕರ್ತರು ಆಗಮಿಸಿ ಆಡಳಿತ ಮಂಡಿಳಿ ವಿರುದ್ಧ ಆಕ್ರೋಶ ವ್ಯಕ್ತಡಿಸಿದ್ದು, ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸ್ಥಳಕ್ಕೆ ಬಸವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ವಾದ ವಿವಾದದ ಬಳಿಕ ಅಂತಿಮವಾಗಿ ಅಯ್ಯಪ್ಪ ಮಾಲೆ ಹಾಕಿಕೊಂಡು ಬಂದಿದ್ದ ಮೂವರು ವಿದ್ಯಾರ್ಥಿಗಳನ್ನು ತರಗತಿಗೆ ಕೂರಿಸಲು ಪ್ರಿನ್ಸಿಪಾಲ್ ಅನುಮತಿ ನೀಡಿದ್ದಾರೆ. ಜೊತೆಗೆ ಆಡಳಿತ ಮಂಡಳಿ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ MES ಪಿಯು ಕಾಲೇಜಿನ ಪ್ರಿನ್ಸಿಪಾಲ್, ನಾವು ಸರ್ಕಾರ ಹಾಗೂ ಕಾಲೇಜು ಆಡಳಿತ ಮಂಡಳಿಯ ಆದೇಶ ಪಾಲಿಸಿದ್ದೇವೆ. ನಮ್ಮಲ್ಲಿ ಸಮವಸ್ತ್ರ ಬಿಟ್ಟು ಬೇರೆ ಯಾವುದೇ ಬಟ್ಟೆ ಧರಿಸುವಂತಿಲ್ಲ. ವಿದ್ಯಾರ್ಥಿಗಳಿಗೆ ನಾವು ತಿಳಿ ಹೇಳಿದ್ದೇವೆ ಅಷ್ಟೇ. ಸದ್ಯಕ್ಕೆ ಮೂವರು ವಿದ್ಯಾರ್ಥಿಗಳನ್ನ ತರಗತಿಗೆ ಕೂರುವಂತೆ ಸೂಚನೆ ನೀಡಿದ್ದು, ಈ ಬಗ್ಗೆ ಆಡಳಿತ ಮಂಡಳಿಯ ಜೊತೆ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.


