
ಬಂಟ್ವಾಳ : ಜವುಳಿ ಅಂಗಡಿಗೆ ಮಾರುವೇಷದಲ್ಲಿ ಬಂದ ಪತ್ನಿ ಗಂಡನಿಗೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಿ.ಸಿ.ರೋಡಿನಲ್ಲಿ ಬುಧವಾರ ರಾತ್ರಿ ನಡೆದಿದೆ. ಜವುಳಿ ಅಂಗಡಿ ಮಾಲಕ ಕೃಷ್ಣ ಕುಮಾರ್ ಸೋಮಯಾಜಿ ಎಂಬವರಿಗೆ ಪತ್ನಿ ಜ್ಯೋತಿ ಸೋಮಯಾಜಿ ಎಂಬವರು ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಾರೆ.


ಬಿ.ಸಿ.ರೋಡಿನಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಇರುವ ಸೋಮಯಾಜಿ ಟೆಕ್ಸ್ಟೈಲ್ಸ್ ಮಳಿಗೆಗೆ ನುಗ್ಗಿದ ಜ್ಯೋತಿ ಕ್ಯಾಶ್ ಕೌಂಟರ್ನಲ್ಲಿ ಕುಳಿತಿದ್ದ ಗಂಡನಿಗೆ ಪತ್ನಿ ಕತ್ತಿಯಿಂದ ಕಡಿದು ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುತು ಸಿಗದಂತೆ ಮಾಡಲು ಆಕೆ ಬುರ್ಖಾ ಧರಿಸಿಕೊಂಡು ಬಂದಿದ್ದಳು.
ಗಂಭೀರವಾಗಿ ಗಾಯಗೊಂಡಿದ್ದ ಕೃಷ್ಣ ಕುಮಾರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿ ಮಧ್ಯೆ ವೈವಾಹಿಕ ತಕರಾರು ಇತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಂಟ್ವಾಳ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಜ್ಯೋತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.


