ಮಂಗಳೂರು: ಕೌಟುಂಬಿಕ ಕಲಹದಿಂದ ಮನನೊಂದು ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯ ರಕ್ಷಣೆ

0 0
Read Time:5 Minute, 7 Second

ಮಂಗಳೂರು: ಕೌಟುಂಬಿಕ ಕಲಹದಿಂದ ಮನನೊಂದು ತನ್ನ ಮಗುವಿನೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನೊಬ್ಬನನ್ನು ಪಣಂಬೂರು ಪೊಲೀಸರು ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಘಟನೆ ಸೋಮವಾರ ಮುಸ್ಸಂಜೆ ವೇಳೆಗೆ ಸಂಭವಿಸಿದೆ. ಕೂಳೂರು ಪಂಜಿಮೊಗರು ಅಂಬಿಕಾ ನಗರ ನಿವಾಸಿ ರಾಜೇಶ್(35) ಮತ್ತವರ ನಾಲ್ಕು ವರ್ಷದ ಪುತ್ರಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ ರಾಜೇಶ್ ತನ್ನ ಮಗಳೊಂದಿಗೆ ತಣ್ಣೀರುಬಾವಿ ಬೀಚ್‌ಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೆಲ್ಫಿ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೊವನ್ನು ಸಾರ್ವಜನಿಕರೊಬ್ಬರು ಪಣಂಬೂರು ಉಪವಿಭಾಗದ ಎಸಿಪಿ ಶ್ರೀಕಾಂತ್‌ರಿಗೆ ಕಳುಹಿಸಿದ್ದರು. ವೀಡಿಯೊವನ್ನು ಗಂಭೀರವಾಗಿ ಪರಿಗಣಿಸಿದ ಎಸಿಪಿ ತಕ್ಷಣ ಪಣಂಬೂರು ಪೊಲೀಸರಿಗೆ ನೀಡಿದ್ದರು. ಆದರೆ ಆ ವೀಡಿಯೊ ಯಾವ ಬೀಚ್‌ನಲ್ಲಿ ಚಿತ್ರೀಕರಿಸಿದ್ದು ಎಂದು ಗೊತ್ತಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಎರಡು ತಂಡಗಳಾಗಿ ಪಣಂಬೂರು ಮತ್ತು ತಣ್ಣೀರುಬಾವಿ ಬೀಚ್‌ಗೆ ತೆರಳಿ ಪರಿಶೀಲಿಸಿದ್ದರು. ತಣ್ಣೀರುಬಾವಿ ಬೀಚ್‌ನಲ್ಲಿ ಗಂಟೆಯ ಹಿಂದೆ ವೀಡಿಯೋದಲ್ಲಿದ್ದ ತಂದೆ-ಮಗಳನ್ನು ನೋಡಿದ್ದಾಗಿ ಸಾರ್ವಜನಿಕರೊಬ್ಬರು ಮಾಹಿತಿ ನೀಡಿದ್ದರು.

ಆ ಮಾಹಿತಿಯನ್ನು ಆಧರಿಸಿ ವಿಚಾರಿಸಿದಾಗ ಅದು ರಾಜೇಶ್ ಎಂದು ತಿಳಿದುಬಂದಿತ್ತು. ತಕ್ಷಣ ಅವರ ಮೊಬೈಲ್ ನಂಬರ್ ಕಲೆ ಹಾಕಿ ಕರೆ ಮಾಡಿದರೆ ಅದು ಸ್ವಿಚ್‌ಆಫ್ ಆಗಿತ್ತು. ರಾತ್ರಿ 9.15ರ ಸುಮಾರಿಗೆ ರಾಜೇಶ್‌ರ ಮೊಬೈಲ್ ಆನ್ ಆಗಿತ್ತು. ತಕ್ಷಣ ಅವರ ಮೊಬೈಲ್ ಲೊಕೇಶನ್ ಆಧರಿಸಿ ಪಂಜಿಮೊಗರು ಅಂಬಿಕಾ ನಗರದಲ್ಲಿರುವ ಅವರ ಮನೆಗೆ ಭೇಟಿ ನೀಡಿದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಿ ಮುಚ್ಚಲಾಗಿತ್ತು. ಕಿಟಿಕಿಯಲ್ಲಿ ನೋಡಿದಾಗ ರಾಜೇಶ್ ಸೀರೆಯಿಂದ ಮನೆಯ ಪಕ್ಕಾಸಿಗೆ ನೇಣು ಬಿಗಿದುಕೊಳ್ಳುವ ಯತ್ನದಲ್ಲಿದ್ದರು. ತಕ್ಷಣ ಪೊಲೀಸರು ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿ ಅವರನ್ನು ಮತ್ತು ಮಗಳನ್ನು ರಕ್ಷಿಸಿದ್ದಾರೆ.

ಪಣಂಬೂರು ಎಸಿಪಿಯವರಿಂದ ಮಾಹಿತಿ ಬಂದಾಕ್ಷಣ ಕಾರ್ಯಪ್ರವೃತ್ತರಾದ ಗುಪ್ತ ವಾರ್ತೆ ವಿಭಾಗದ ಸಿಬ್ಬಂದಿ ಪಕಿರೇಶ್ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ರಾಕೇಶ್ ಮತ್ತು ಶರಣ ಬಸವ ತಣ್ಣೀರುಬಾವಿ ಬೀಚ್‌ನಲ್ಲಿ ಹುಡುಕಾಡಿದ್ದಾರೆ. ಎಲ್ಲೂ ಸಿಗದಿದ್ದಾಗ ಬೀಚ್‌ನಲ್ಲಿದ್ದ ಅಂಗಡಿ, ಸಾರ್ವಜನಿಕರ ಬಳಿ ವಿಚಾರಿಸಿದ್ದಾರೆ. ವೀಡಿಯೊದಲ್ಲಿರುವ ವ್ಯಕ್ತಿ ಬೀಚ್‌ಗೆ ಬಂದಿರುವ ಮಾಹಿತಿ ಕಲೆ ಹಾಕಿ ಆತನ ಗುರುತು ಪತ್ತೆ ಹಚ್ಚಿದ್ದಾರೆ. ಬಳಿಕ ರಾಜೇಶ್‌ನ ಮೊಬೈಲ್ ಸಂಖ್ಯೆ ಕಲೆ ಹಾಕಿ ಸತತ ಪ್ರಯತ್ನದ ಮೂಲಕ ಅವರ ಲೊಕೇಶನ್ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣ ಅಲ್ಲಿಗೆ ತೆರಳಿ ತಂದೆ-ಮಗಳ ಜೀವ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಂಡತಿ ಜೊತೆಗೆ ಜಗಳವಾಡಿ ರಾಜೇಶ್‌ ಮಗಳೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದರು. ನಿತ್ಯ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಇದರಿಂದ ಮನನೊಂದು ನಾಲ್ಕು ವರ್ಷದ ಮಗಳ ಜೊತೆಗೆ ಸಮುದ್ರಕ್ಕೆ ಹಾರುವ ಯೋಚನೆಯಲ್ಲಿ ತಣ್ಣೀರುಬಾವಿ ಬೀಚ್‌ಗೆ ಬಂದಿದ್ದರು. ಅಲ್ಲಿ ವಿಡಿಯೋ ಮಾಡಿ ಸಂಬಂಧಿಕರಿಗೆ ಕಳುಹಿಸಿದ್ದರು. ಆದರೆ ವಿಡಿಯೊದಲ್ಲಿ ಮುಖ ಕಾಣುತ್ತಿರಲಿಲ್ಲ. ತಂದೆ ಮತ್ತು ಮಗಳು ನಡೆದುಹೋಗುತ್ತಿದ್ದ ನೆರಳು ಮಾತ್ರ ಕಾಣಿಸುತ್ತಿತ್ತು. ಜೊತೆಗೆ ತಾಯಿ ಹೇಗೆ ಬೇಕಾದರೂ ಬದುಕಲಿ ಮಗಾ, ನಾವು ಅವಳಿಂದ ದೂರವಾಗುವ ಎಂದು ಹೇಳುತ್ತಿರುವುದು ಕೇಳಿಸುತ್ತಿತ್ತು. ಬೀಚ್‌ನಲ್ಲಿ ಬಹಳಷ್ಟು ಜನ ಮತ್ತು ಪೊಲೀಸರು ಇರುವುದರಿಂದ ಸಮುದ್ರಕ್ಕೆ ಹಾರಲು ಧೈರ್ಯ ಸಾಕಾಗದೆ ವಾಪಸು ಮನೆಗೆ ಹೋಗಿ ನೇಣು ಹಾಕಿಕೊಳ್ಳಲು ಮುಂದಾಗಿದ್ದರು.

ಮಗುವಿನೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯನ್ನು ಸಕಾಲಿಕ ಕಾರ್ಯಾಚರಣೆ ಮೂಲಕ ರಕ್ಷಿಸಿದ ಪಣಂಬೂರು ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಪಣಂಬೂರು ಪೊಲೀಸರ ಸಕಾಲಿಕ ಕ್ರಮಕ್ಕೆ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *