
ಮಂಗಳೂರು: ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ದತ್ತಿಗಳ ಇಲಾಖೆಗಳ ಆಡಳೀತಕ್ಕೆ ಒಳಪಟ್ಟ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದ ವಾರ್ಷಿಕ ತೀರ್ಥ ಸ್ನಾನ ಅಕ್ಟೋಬರ್ 17 ರಿಂದ ಪ್ರಾರಂಭವಾಗಲಿದ್ದು, ಬರುವ ವರ್ಷದ ಏಪ್ರಿಲ್ 14ರ ವರೆಗೆ ಜರುಗಲಿದೆ.


ನೆಲ್ಲಿ ತೀರ್ಥ ಸೋಮೇಶ್ವರ ಗುಹಾ ದೇವಾಲಯವು ಕರಾವಳಿಯ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಇದೊಂದು ಗುಹಾ ದೇವಾಲಯವಾಗಿದ್ದು ಮಹಾ ಶಿವನು ಲಿಂಗ ಸ್ವರೂಪಿಯಾಗಿ ಇಲ್ಲಿ ನೆಲೆಸಿದ್ದಾನೆ. ಇದೊಂದು ಉದ್ಭವ ಶಿವಲಿಂಗದ ನೆಲೆಯಾಗಿದೆ ಅಂದ ಹಾಗೆ ಭಕ್ತರಿಗೆ ಈ ಶಿವಲಿಂಗದ ದರ್ಶನಕ್ಕೆ ಅವಕಾಶ ಸಿಗುವುದು ವರ್ಷದಲ್ಲಿ ಆರು ತಿಂಗಳು ಮಾತ್ರ ಉಳಿದ ಆರು ತಿಂಗಳು ಭಕ್ತರಿಗೆ ಈ ಶಿವಲಿಂಗದ ದರ್ಶನಕ್ಕೆ ಅವಕಾಶವಿಲ್ಲ. ಈ ಸಮಯದಲ್ಲಿ ಋಷಿಮುನಿಗಳು ಈ ಗುಹೆಯೊಳಗೆ ತಪಸ್ಸನ್ನು ಮಾಡುತ್ತಿರುತ್ತಾರೆ ಎಂಬುದು ಪ್ರತೀತಿ ಕೂಡ ಇದೆ.
ನೆಲ್ಲಿತೀರ್ಥದಲ್ಲಿ ಗುಹಾಪ್ರವೇಶ, ತೀರ್ಥಸ್ನಾನ ಇದೇ 17ರಂದು ಬೆಳಿಗ್ಗೆ 9ಕ್ಕೆ ಕಾಸರಗೋಡಿನ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ಆರಂಭವಾಗಲಿದೆ. ಏಪ್ರಿಲ್ವರೆಗೆ ಪ್ರತಿದಿನ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 12.30ರವರೆಗೆ ಗುಹಾಪ್ರವೇಶ, ತೀರ್ಥಸ್ನಾನ ಇರುವುದು. ಗುಹಾತೀರ್ಥ ಸ್ನಾನ ಮಾಡುವವರು ಪ್ರತ್ಯೇಕ ಒಂದು ಜೊತೆ ಬಟ್ಟೆ, ಪುರುಷರು ಬೈರಾಸು ಅಥವಾ ಲುಂಗಿ, ಮಹಿಳೆಯರು ಚೂಡಿದಾರ್ ಅಥವಾ ಸೀರೆ ತರುವುದು ಉತ್ತಮ. ಕಚೇರಿಯಲ್ಲಿ ರಶೀದಿ ಪಡೆದು ಕೆರೆಯಲ್ಲಿ ಸ್ನಾನ ಮಾಡಿ ಬರುವುದು ಕಡ್ಡಾಯ. ಗುಹಾಪ್ರವೇಶಕ್ಕೆ ಎಲ್ಲಾ ಜಾತಿ, ಧರ್ಮದವರಿಗೂ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.


ಮುಂದಿನ ವರ್ಷ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಅದರ ಅಂಗವಾಗಿ ಭಕ್ತರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಲು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಈಗಾಗಲೇ ಪ್ರಾರಂಭವಾಗಿವೆ. ಇದಕ್ಕೆ ಭಕ್ತರೂ ಕೈಜೋಡಿಸಬೇಕು. ಹೆಚ್ಚಿನ ಮಾಹಿತಿಗೆ ದೂ:0824–2299142, 8088708914 ಸಂಪರ್ಕಿಸುವಂತೆ ಕೋರಲಾಗಿದೆ.
