
ಪುತ್ತೂರು: ವಿವಾಹದ ಭರವಸೆ ನೀಡಿ ಅತ್ಯಾಚಾರ ಎಸಗಿ, ಗರ್ಭಿಣಿಯಾದ ಬಳಿಕ ಯುವತಿಯನ್ನು ವಂಚಿಸಿದ್ದ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಲಭಿಸಿದೆ. ಬಿಜೆಪಿ ನಾಯಕನ ಪುತ್ರ ಆರೋಪಿ ಶ್ರೀಕೃಷ್ಣ ಜೆ. ರಾವ್ ಅವರೇ ಮಗುವಿನ ತಂದೆ ಎಂದು ಡಿಎನ್ಎ ಪರೀಕ್ಷಾ ವರದಿಯಿಂದ ಸ್ಪಷ್ಟಗೊಂಡಿದೆ.
ಶನಿವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿಶ್ವಕರ್ಮ ಮಹಾ ಮಂಡಲದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಅವರು ಈ ಡಿಎನ್ಎ ವರದಿಯ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗಪಡಿಸಿದರು. ವರದಿಯಲ್ಲಿ ಮಗುವಿನ ಮತ್ತು ಆರೋಪಿ ಶ್ರೀಕೃಷ್ಣನ ರಕ್ತದ ಮಾದರಿ ಸಂಪೂರ್ಣವಾಗಿ ಹೊಂದಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.


ಮಗುವಿನ ತಂದೆ ಶ್ರೀಕೃಷ್ಣ ಜೆ. ರಾವ್ ಎಂಬ ವರದಿ ಶುಕ್ರವಾರವೇ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದು, ಸಂತ್ರಸ್ತೆಯ ಕುಟುಂಬಕ್ಕೆ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ನಂಜುಂಡಿ ಅವರು ಹೇಳಿದ್ದಾರೆ.
ಬಿಜೆಪಿ ಮುಖಂಡ ಪಿ.ಜಿ. ಜಗನ್ನಿವಾಸ್ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ. ರಾವ್ ಸಂತ್ರಸ್ತೆಯೊಂದಿಗೆ ವಿವಾಹವಾಗುವುದು ನಮ್ಮ ಮುಖ್ಯ ಒತ್ತಾಯವಾಗಿದೆ ಎಂದು ನಂಜುಂಡಿ ತಿಳಿಸಿದರು.
ಅಲ್ಲದೆ, ಹಿಂದುತ್ವದ ಬಗ್ಗೆ ಮಾತನಾಡುವ ಆರ್ಎಸ್ಎಸ್, ಬಜರಂಗದಳ, ಶ್ರೀ ರಾಮ ಸೇನೆಗಳು ಹಾಗೂ ಹಿಂದುತ್ವದ ಮುಖಂಡರೆನಿಸಿಕೊಂಡವರು ಹಿಂದು ಸಮುದಾಯದ ಸಂತ್ರಸ್ತೆಗೆ ಕೂಡಲೇ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತೆ, ಆಕೆಯ ತಾಯಿ ನಮಿತಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು
