ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ..!

0 0
Read Time:5 Minute, 39 Second

ಮಂಗಳೂರು: ಕೆಂಪುಕಲ್ಲು ವಿಷಯದಲ್ಲಿ ಎದುರಾದ ಕಾನೂನಾತ್ಮಕ ತೊಡಕನ್ನು ಈಗಾಗಲೇ ಸರಿಪಡಿಸಿ ಸರಳೀಕರಣ ಮಾಡಿ ಸಚಿವ ಸಂಪುಟ ಹಾಗೂ ಮುಖ್ಯಮಂತ್ರಿಯವರ ಅನುಮತಿ ಪಡೆಯಲಾಗಿದೆ. ಸರಳೀಕರಣ ಮಾಡಿರುವ ಹೊಸ ನೀತಿ ಜಿಲ್ಲಾಡಳಿತದ ಮೂಲಕ ಅನುಷ್ಟಾನಗೊಳ್ಳಲಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದ‌ರ್ ತಿಳಿಸಿದ್ದಾರೆ.

ನಗರದ ಸರ್ಕ್ಯೂಟ್‌ ಹೌಸ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೆಂಪುಕಲ್ಲು ತೆಗೆಯಲು ಅನುಮತಿ ಕೋರಿ ದ.ಕ. ಜಿಲ್ಲೆಯಲ್ಲಿ ಸಲ್ಲಿಕೆಯಾಗಿದ್ದ 53 ಅರ್ಜಿಗಳಲ್ಲಿ 25 ಅರ್ಜಿಗಳಿಗೆ ಅನುಮತಿಯನ್ನೂ ಸಂಬಂಧಪಟ್ಟ ಇಲಾಖೆಯಿಂದ ನೀಡಲಾಗಿದೆ ಎಂದರು.

ಕೆಂಪುಕಲ್ಲು ವಿಚಾರದಲ್ಲಿ ಹಲವು ಕಾಲದಿಂದ ಕಾನೂನಾತ್ಮಕ ತೊಡಕು ಇತ್ತು. ಇದರಿಂದಾಗಿ ಪರವಾನಿಗೆ ಪಡೆಯದೆ ಅಕ್ರಮವಾಗಿ ವ್ಯವಹಾರ ನಡೆಯುತ್ತಿತ್ತು. ಇದನ್ನು ಕಾನೂನುಬದ್ದಗೊಳಿಸುವ ಉದ್ದೇಶದಿಂದ ಹಲವು ಸುತ್ತಿನ ಸಭೆ, ಸಮಾಲೋಚನೆ ನಡೆಸಿದ ಬಳಿಕ ಈಗ ಸರಕಾರದ ಸಚಿವ ಸಂಪುಟದಲ್ಲಿ ಇದರ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಕೆಂಪು ಕಲ್ಲು ತೆಗೆಯಲು ಕೃಷಿ ಇಲಾಖೆಯಿಂದಲೂ ಅನುಮತಿ ಪಡೆಯಬೇಕು, ಆಳ ಮಾಡುವಾಗ ನಿಗದಿತ ಪ್ರಮಾಣ ಮಾತ್ರ ಆಳ ಮಾಡಬೇಕು ಹಾಗೂ ಅನುಮತಿಗಾಗಿ ವಿವಿಧ ಇಲಾಖೆಗಳ ಮಧ್ಯೆ ಸುತ್ತಾಟ ನಡೆಸಿ ಹಲವು ಕಾಲ ಕಾಯುವ ಪರಿಸ್ಥಿತಿ ಇತ್ತು. ಇದನ್ನೆಲ್ಲವನ್ನು ಸರಳೀಕರಣಗೊಳಿಸಿ ಕರಾವಳಿ ಜನರಿಗೆ ಗೃಹ ನಿರ್ಮಾಣಕ್ಕೆ ಅನುಕೂಲವಾಗುವ ಕೆಂಪುಕಲ್ಲು ಸಮರ್ಪಕವಾಗಿ ನೀಡುವಂತೆ ಮಾಡಲು ಹೊಸ ನೀತಿಯಲ್ಲಿ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಕೆಂಪು ಕಲ್ಲು ವಿಚಾರದಲ್ಲಿ ಸರಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಖಾದ‌ರ್ ಅವರು, ಇದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಈ ವಿಷಯದಲ್ಲಿ ಸರಕಾರ ಹಾಗೂ ಪ್ರತಿಪಕ್ಷಗಳು ಏನು ಹೇಳುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದಾಗಿದೆ. ಆದರೆ, ಜನಸಾಮಾನ್ಯರಿಗೆ ಬೇಕಾಗುವ ಕೆಂಪುಕಲ್ಲು ವಿಚಾರದಲ್ಲಿ ಎದುರಾಗಿರುವ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಆಗಿದೆ ಎಂದರು.

ಸಿಆರ್‌ಝಡ್ ಮರಳು ವಿಚಾರದಲ್ಲಿ ಹಿಂದೆ ಆಸ್ಕರ್ ಫೆರ್ನಾಂಡೀಸ್ ಅವರು ಇದ್ದಾಗ ಕೇಂದ್ರದಲ್ಲಿ ಇಲಾಖಾ ಸಚಿವರ ಜತೆಗೆ ಚರ್ಚಿಸಿ ಪೂರಕ ಅನುಮತಿ ವ್ಯವಸ್ಥೆ ಕ್ಷಿಪ್ರವಾಗಿ ಕೈಗೊಳ್ಳುತ್ತಿದ್ದರು. ಆದರೆ ಬಳಿಕ ರಾಜ್ಯದಿಂದ ಹೋದ ಸಂಗತಿಗಳಿಗೆ ಕೇಂದ್ರದ ಅನುಮೋದನೆ ಸೂಕ್ತವಾಗಿ ದೊರೆಯುತ್ತಿಲ್ಲ. ಈ ಬಗ್ಗೆ ರಾಜ್ಯ ಸರಕಾರ ಹಾಗೂ ಕೇಂದ್ರದ ಜನಪ್ರತಿನಿಧಿಗಳು ಒತ್ತಡ ಹೇರಬೇಕಾಗಿದೆ ಎಂದು ಖಾದರ್ ಹೇಳಿದರು.

ಜಿಲ್ಲೆಯ ಹಲವೆಡೆ ಈಗಾಗಲೇ ವಶಪಡಿಸಿಕೊಂಡ ಮರಳಿನ ಸಾಕಷ್ಟು ದಾಸ್ತಾನು ಇದೆ. ಇದನ್ನು ಸರಕಾರಿ ಕಾಮಗಾರಿಗೆ ಮೊದಲ ಆದ್ಯತೆಯಲ್ಲಿ ನೀಡುವಂತೆ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೀಗಾಗಿ ಸರಕಾರಿ ಕಾಮಗಾರಿ ಗುತ್ತಿಗೆ ಪಡೆದವರು ಗಣಿ ಇಲಾಖೆಗೆ ಸಂಪರ್ಕಿಸಿ ಮರಳು ಪಡೆಯಲು ಅವಕಾಶ ಇದೆ ಎಂದರು.

ಕೆಂಪುಕಲ್ಲುವಿಗೆ ಇತ್ತೀಚೆಗೆ ಏರಿಕೆ ಮಾಡಲಾದ ರಾಜಧನವನ್ನು ಇಳಿಕೆ ಮಾಡಲಾಗಿದೆ. ನಿಖರ ರಾಯಲ್ಟಿ ದರ ವಾರದೊಳಗೆ ತಿಳಿಯಲಿದೆ. ಟನ್‌ಗೆ 280 ರೂ.ಗಳಿದ್ದ ರಾಜಧನವನ್ನು ಅಂದಾಜು 90 ರೂ.ಗಳಿಗೆ ಇಳಿಕೆ ಮಾಡಿರುವುದಾಗಿ ತಿಳಿದು ಬಂದಿದೆ. ಈ ಮೂಲಕ ಜನಸಾಮಾನ್ಯರಿಗೆ ಕೆಂಪುಕಲ್ಲು ನಿಯಮಿತವಾಗಿ ನೀಡಲು ಸಾಧ್ಯವಾಗಲಿದೆ. ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಕೆಂಪು ಕಲ್ಲು ದರ ಹಿಂದಿಗಿಂತ ಏರಿಕೆ ಮಾಡಬಾರದು. ಒಂದು ವೇಳೆ ಕೆಂಪುಕಲ್ಲು ದರ ಏರಿಕೆ ಆದ ಬಗ್ಗೆ ಮಾಹಿತಿ ಬಂದರೆ ಸರಕಾರವೇ ಕೆಂಪುಕಲ್ಲು ದರ ನಿಗದಿ ಮಾಡಿ ಸ್ಯಾಂಡ್ ಬಜಾರ್ ಆ್ಯಪ್ ಮಾದರಿಯಲ್ಲಿಯೇ ಹೊಸ ಆ್ಯಪ್ ತಂದು ಜನಸಾಮಾನ್ಯರಿಗೆ ಕೆಂಪು ಕಲ್ಲು ನೀಡುವ ಬಗ್ಗೆ ಮುಂಬರುವ ದಿನಗಳಲ್ಲಿ ಯೋಚನೆ ಮಾಡಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸೆ.22ರಿಂದ ಜಾತಿಗಣತಿ ನಡೆಯಲಿದ್ದು, ಎಲ್ಲಾ ಮನೆಯವರು ಇದಕ್ಕೆ ಸೂಕ್ತ ಸ್ಪಂದನೆ ನೀಡಬೇಕು. ಸ್ವಯಂಪ್ರೇರಿತರಾಗಿ ಮನೆಯವರು, ಸಂಘ ಸಂಸ್ಥೆ ಸಮಾಜ ಸಂಘಟನೆಯವರು ಸಹಕಾರ ಅಗತ್ಯವಾಗಿ ನೀಡಬೇಕು. ಇದು ಪ್ರತೀ ಮನೆಯವರಿಗೆ ಅಗತ್ಯವಾಗಿ ಬೇಕಾಗಿದೆ. ಗಣತಿದಾರರು ಮನೆಗೆ ಬರುವಾಗ ಎಲ್ಲಾ ಮಾಹಿತಿಯನ್ನು ಅವರಿಗೆ ನೀಡಿ ಸಹಕರಿಸಬೇಕು. ಗಣತಿ ವೇಳೆ ಕೇಳಲಾಗುವ ಪ್ರಶ್ನೆಗಳಿಗೆ ಏನು ಉತ್ತರ ನೀಡಬೇಕು ಎಂಬ ಮಾಹಿತಿಗಾಗಿ ಆಶಾ ಕಾರ್ಯಕರ್ತರಿಂದ ಫಾರಂ ಅನ್ನು ಮುಂಚಿತವಾಗಿ ಪಡೆದು ಸಿದ್ಧರಿರಬೇಕು. ಆಧಾ‌ರ್ ಮೊಬೈಲ್ ಲಿಂಕ್ ಆಗಿರುವ ಬಗ್ಗೆಯೂ ಗಮನಿಸಬೇಕು. ಈ ಬಗ್ಗೆ ಜನಪ್ರತಿನಿಧಿಗಳು, ಸಮಾಜ ಸಂಘಟನೆಯವರಿಗೆ ಅರಿವು ನೀಡಲು ಸೆ.17ರಂದು ಮಂಗಳೂರಿನಲ್ಲಿ ವಿಶೇಷ ಸಭೆ ಆಯೋಜಿಸಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
100 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *