
ಕಾರ್ಕಳದ ಅಜೆಕಾರು ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯೊಬ್ಬರ ಕತ್ತಿನಿಂದ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಸವದತ್ತಿ ತಾಲೂಕಿನ ಗೊರವನ ಕೊಳ್ಳ ನಿವಾಸಿ ಸುನಿಲ್ ರಮೇಶ್ ಲಮಾಣಿ(29) ಬಂಧಿತ ಆರೋಪಿ.


ಕಾರ್ಕಳ ಪೊಲೀಸ್ ಠಾಣಾ ನಿರೀಕ್ಷಕ ಡಿ. ಮಂಜಪ್ಪ ನೇತೃತ್ವದಲ್ಲಿ ಅಜೆಕಾರು ಪಿಎಸ್‌ಐ ಮಹೇಶ್ ಹಾಗೂ ಸಿಬ್ಬಂದಿಯವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸೆ. 9ರಂದು ಸಂಜೆ 4.30ರ ಸುಮಾರಿಗೆ ಕಾರ್ಕಳದ ಮುಳ್ಕಾಡು ಎಳ್ಳಾರೆ ಗ್ರಾಮದ ಹೊಸಮನೆ ನಿವಾಸಿ 80 ವರ್ಷದ ಕುಮುದಾ ಶೆಟ್ಟಿ ಎಂಬವರ ಮನೆ ಸಮೀಪ ಬಂದ ಆರೋಪಿ, ಕುಮದಾ ಅವರ ಕತ್ತಿನಲ್ಲಿದ್ದ 25 ಗ್ರಾಂ ತೂಕದ ಚಿನ್ನದ ಸರ ಕದ್ದು ಪರಾರಿಯಾಗಿದ್ದ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿ0ದ ಕಳವು ಮಾಡಿದ ಚಿನ್ನದ ರೋಪ್ ಚೈನನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.