
ಬೆಂಗಳೂರು : ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೋಲಿಸ್ ಠಾಣೆಗಳೆಂದು ಘೋಷಿಸಲು ಹಾಗೂ ಸದರಿ ಠಾಣೆಗಳ ನಿರ್ವಹಣೆಗಾಗಿ ಅಗತ್ಯವಿರುವ 450 ವಿವಿಧ ಹುದ್ದೆಗಳಿಗೆ ಮಂಜೂರಾತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


ಬೆಂಗಳೂರು ನಗರಕ್ಕೆ 02 ರಂತೆ ರಾಜ್ಯದಲ್ಲಿ ಒಟ್ಟು 33 ಡಿಸಿಆರ್‌ಇ ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಮತ್ತು ಸದರಿ 33 ವಿಶೇಷ ಪೊಲೀಸ್ ಠಾಣೆಗಳ ನಿರ್ವಹಣೆಗಾಗಿ ಡಿಸಿಆರ್‌ಇ ಘಟಕದಲ್ಲಿ ಹಾಲಿ ಇರುವ 340 ಹುದ್ದೆಗಳ ಜೊತೆಗೆ ಹೆಚ್ಚುವರಿಯಾಗಿ ಈ ಕೆಳಕಂಡ 450 ವಿವಿಧ ವೃಂದದ ಹುದ್ದೆಗಳನ್ನು ಮಂಜೂರು ಮಾಡುವಂತೆ ಕ್ರಮ ಸಂಖ್ಯೆ (6) ರಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಡಿಸಿಆರ್‌ಇ ಇವರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಸದರಿ ಪ್ರಸ್ತಾವನೆಯನ್ನು ದಿನಾಂಕ: 20-06-2024 ರಂದು ನಡೆದ ಸಚಿವ ಸಂಪುಟ ಸಭೆಯ ಮುಂದೆ ಸಲ್ಲಿಸಲಾಗಿರುತ್ತದೆ. ಸಚಿವ ಸಂಪುಟವು ತಾತ್ವಿಕ ಅನುಮೋದನೆ ನೀಡಿರುತ್ತದೆ. ಮುಂದುವರೆದು, ಅಧಿಸೂಚನೆ ಹೊರಡಿಸುವ ಪೂರ್ವದಲ್ಲಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಠಾಣೆಗಳಿಗೆ ಬೇಕಾಗುವ ಮೂಲಸೌಕರ್ಯಗಳು, ಅಗತ್ಯ ಸಿಬ್ಬಂದಿ, ನೇಮಕಾತಿ ಇವುಗಳ ಅವಶ್ಯಕತೆ ಗಮನಿಸಿದ ಸಚಿವ ಸಂಪುಟವು ಇವುಗಳ ಕುರಿತು ಗೃಹ ಸಚಿವರು ಮತ್ತು ಸಮಾಜ ಕಲ್ಯಾಣ ಸಚಿವರು ಪರಸ್ಪರ ಚರ್ಚಿಸಿದ ನಂತರ ಇವುಗಳನ್ನು ಒಳಗೊಂಡು ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಸಲ್ಲಿಸುವಂತೆ ಸಚಿವ ಸಂಪುಟವು ಇಲಾಖೆಗೆ ಸೂಚಿಸಿತು.


ಸಚಿವ ಸಂಪುಟದ ನಿರ್ದೇಶನದಂತೆ, ಮಾನ್ಯ ಗೃಹ ಸಚಿವರು ಮತ್ತು ಮಾನ್ಯ ಸಮಾಜ ಕಲ್ಯಾಣ ಸಚಿವರುಗಳು ದಿನಾಂಕ: 04-07-2024 ರಂದು, ಒಳಾಡಳಿತ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಆರ್ಥಿಕ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ದೌರ್ಜನ್ಯ ತಡ ಪ್ರಕರಣಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಮತ್ತು ದೌರ್ಜನ್ಯ ಪ್ರಕರಣಗಳು ಆಗದಂತೆ ಕ್ರಮವಹಿಸಲು ಡಿಸಿಆರ್‌ಇ ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಿಸುವುದು. ಶಿಕ್ಷೆಯ ಪ್ರಮಾಣವನ್ನು ಇತರೆ ರಾಜ್ಯಗಳಂತೆ ಹೆಚ್ಚಿಸುವುದು ಅಗತ್ಯವಿದೆ ಎಂದು ಪರಿಗಣಿಸಿ, ಡಿಸಿಆರ್‌ಇ ಪ್ರಸ್ತಾವನೆಯನ್ನು ಮತ್ತೊಮ್ಮೆ ಸಚಿವ ಸಂಪುಟಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು.
