
ದಿಗಂತ್ ಮಂಚಾಲೆ, ಧನ್ಯಾ ರಾಮ್‌ಕುಮಾರ್ ಸೇರಿ ಹಲವರು ಮುಖ್ಯಭೂಮಿಕೆಯಲ್ಲಿರುವ ಪೌಡರ್ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಕಾಮಿಡಿ ಕಥಾಹಂದರದ ಈ ಚಿತ್ರಕ್ಕೆ ಗುಲ್ಟು ಸಿನಿಮಾ ಖ್ಯಾತಿಯ ಜನಾರ್ದನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದಾರೆ.



Powder Teaser: ಈ ಹಿಂದೆ ಕೆ.ಆರ್.ಜಿ ಮತ್ತು ಟಿ.ವಿ.ಎಫ್ ಘೋಷಿಸಿದ ಪೌಡರ್ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಇಬ್ಬರು ಯುವಕರು ಒಂದು ನಿಗೂಢವಾದ ಪೌಡರ್ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ ಪೌಡರ್. ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಗುವುದೇ? ಪೌಡರ್ ಹಿಂದಿನ ಪವರ್ ಅವರಿಗೆ ತಿಳಿಯುವುದೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ಬರ್ತಿದೆ ಪೌಡರ್ ಸಿನಿಮಾ.
ಜುಲೈನಲ್ಲಿ ತೆರೆಗೆ
ಈಗಾಗಲೇ ತನ್ನ ಟೀಸರ್ ಮೂಲಕ ಪೌಡರ್ ಎಲ್ಲೆಡೆ ನಗೆ ಚಟಾಕಿ ಹತ್ತಿಸಿದ್ದು, ಚಿತ್ರ ಬಿಡುಗಡೆಯ ನಂತರ ಈ ಹಾಸ್ಯ, ನಗು ದುಪ್ಪಟ್ಟುಗೊಳ್ಳಲಿದೆ ಎಂಬುದು ತಂಡದ ಭರವಸೆಯ ಮಾತುಗಳು. ಪೌಡರ್ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್ ಮತ್ತು ಟಿವಿಎಫ್ ಮೋಷನ್ ಪಿಕ್ಚರ್ಸ್‌ನ ಸಹಯೋಗದಲ್ಲಿ ಮೂಡಿ ಬಂದಿರುವ ಮೊದಲ ಚಿತ್ರವಾಗಿದೆ. ನಿರ್ಮಾಣ ಮತ್ತು ವಿತರಣೆಯಲ್ಲಿ ತೊಡಗಿಸಿಕೊಂಡಿರುವ ಕೆಆರ್‌ಜಿ ಸ್ಟುಡಿಯೋಸ್, ಈಗಾಗಲೇ ಹಲವು ಸಿನಿಮಾಗಳನ್ನು ಪ್ರೇಕ್ಷಕರ ಮುಂದಿಟ್ಟಿದೆ. ಈಗ ಪೌಡರ್ ಮೂಲಕ ಜುಲೈ 12 ಚಿತ್ರಮಂದಿರಗಳತ್ತ ಆಗಮಿಸಲಿದೆ.


ಕೆಆರ್‌ಜಿ ಜತೆ ಕೈ ಜೋಡಿಸಿದ ಟಿವಿಎಫ್
ವಿಭಿನ್ನ ಕಥಾವಸ್ತುವನ್ನು ಸಿನಿ ಪ್ರೇಕ್ಷಕರ ಮುಂದಿಡುವ ಗುರಿಯೊಂದಿಗೆ ಈಗಾಗಲೇ ಹಲವು ಚಿತ್ರಗಳನ್ನು ನಿರ್ಮಿಸಿರುವ ಈ ಸಂಸ್ಥೆ, ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಜತೆ ಸೇರಿ ಪೌಡರ್ ಸಿನಿಮಾ ನಿರ್ಮಾಣ ಮಾಡಿದೆ. ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಸಂಸ್ಥೆ ಹಲವಾರು ವೆಬ್ ಸೀರೀಸ್ ಗಳ ಮೂಲಕ ಛಾಪು ಮೂಡಿಸಿದೆ. ಈ ಜಂಟಿ ಸಹಯೋಗದಲ್ಲಿ ಮೂಡಿ ಬಂದಿರುವ ಪೌಡರ್ ಸಹ ಸದ್ಯ ಕುತೂಹಲ ಮೂಡಿಸುತ್ತಿದೆ. ವಿಶೇಷ ಏನೆಂದರೆ, ಈ ಚಿತ್ರಕ್ಕೆ ಗುಲ್ಟು ಸಿನಿಮಾ ಖ್ಯಾತಿಯ ಜನಾರ್ದನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದಾರೆ.

ಕೆ.ಆರ್.ಜಿ ಸ್ಟುಡಿಯೋಸ್‌ನ ಕಾರ್ತಿಕ್ ಗೌಡ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್‌ನ ಅರುನಭ್ ಕುಮಾರ್ ಮಾತನಾಡಿ, ಯುವಕರಿಗೆ, ಸಿನಿ ಪ್ರೇಕ್ಷಕರಿಗೆ ಹೊಸ ರೀತಿಯ ಕಥೆಗಳನ್ನು, ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಚಿತ್ರಗಳನ್ನು ನೀಡುವುದು ನಮ್ಮ ಮುಖ್ಯ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಪೌಡರ್ ನಮ್ಮ ಸಹಯೋಗದ ಚೊಚ್ಚಲ ಪ್ರಯತ್ನ.
ಯಾರೆಲ್ಲ ನಟಿಸಿದ್ದಾರೆ?
ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯ ರಾಮಕುಮಾರ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಅನಿರುದ್ಧ ಆಚಾರ್ಯ, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ, ನಾಗಭೂಷಣ್, ಹುಲಿ ಕಾರ್ತಿಕ್, ಭರತ್ ಜಿಬಿ, ಚು ಖೋಯ್ ಶೆಂಗ್ ತಾರಾಗಣದಲ್ಲಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.